ಸರ್ವಧರ್ಮಿಯರ ಸಹಭಾಗಿತ್ವದೊಂದಿಗೆ, ವಿವಿಧ ಸಮುದಾಯದ ಹಿರಿಯರಿಂದ ಬಿ.ರಮಾನಾಥ ರೈಯವರ ಚುನಾವಣಾ ಕಚೇರಿ ಉದ್ಘಾಟನೆ

ಬಂಟ್ವಾಳ: ಸರ್ವಧರ್ಮಿಯರ ಸಹಭಾಗಿತ್ವದೊಂದಿಗೆ, ವಿವಿಧ ಸಮುದಾಯದ ಹಿರಿಯರಿಂದ ವಿನೂತನ ಶೈಲಿಯಲ್ಲಿ ಬಿ.ಸಿ.ರೋಡಿನ ಪದ್ಮಾ ಪೆಟ್ರೋಲು ಪಂಪ್ ಮುಂಭಾಗದಲ್ಲಿರುವ ಧನಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಬಿ.ರಮಾನಾಥ ರೈಯವರ ಚುನಾವಣಾ ಕಚೇರಿ ಬುಧವಾರ ಉದ್ಘಾಟಣೆಗೊಂಡಿತು.


ಪಕ್ಷದ ಹಿರಿಯ ಮುಖಂಡರುಗಳಾದ ಜನಾರ್ಧನ ಶೆಟ್ಟಿ ಮೊಡಂಕಾಪುಗುತ್ತು, ರಾಮಣ್ಣ ಪೂಜಾರಿ ಕಂಗಿತ್ತಿಲು, ಜಿನರಾಜ ಆರಿಗ ಪಚ್ಚಾಜೆ, ಬಿ.ಎಚ್.ಖಾದರ್ ಬಂಟ್ವಾಳ, ವಲೇರಿಯನ್ ಡಿಸೋಜ, ಬಾಳಪ್ಪ ಶೆಟ್ಟಿ ಕರೋಪಾಡಿ, ಬೇಬಿ ನಾಯಕ್ ಸಜಿಪಮುನ್ನೂರು ಮೊದಲಾದವರಿದ್ದು ದೀಪ ಬೆಳಗಿಸಿ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು.

ಸಮಪಾಲು-ಸಮಬಾಳು ನನ್ನ ಬದುಕಿನ ತತ್ವ-ರೈ

ಈ ಸಂದರ್ಭ ಮಾತನಾಡಿದ ಬಿ.ರಮಾನಾಥ ರೈ ಕಳೆದ ಚುಜಾವಣೆಯಲ್ಲಿ ಬಿಜೆಪಿಗರ ಅಪಪ್ರಚಾರದಿಂದ ನನಗೆ ಸೋಲಾಗಿದೆ. ಈಗ ಅದು ಕ್ಷೇತ್ರದ ಜನತೆಗೆ ಮನವರಿಕೆಯಾಗಿದೆ. ಇಂತಹ ಅಪಪ್ರಚಾರಗಳ ಬಗ್ಗೆ ಕಾಂಗ್ರೇಸ್ ಕಾರ್ಯಕರ್ತರು ಜಾಗೃತರಾಗಬೇಕು, ಕ್ಷೇತ್ರದ ಜನತೆಗೆ ಸತ್ಯಾಂಶವನ್ನು ತಿಳಿಸುವ ಕಾರ್ಯ ಕಾರ್ಯಕರ್ತರಿಂದ ನಡೆಯಬೇಕು ಎಂದರು.
9ನೇ ಬಾರಿಗೆ ಸ್ಪರ್ಧಿಸುವ ಅವಕಾಶವನ್ನು ಪಕ್ಷ ನನಗೆ ನೀಡಿದೆ. ಪಕ್ಷ ಹಾಗೂ ಕಾರ್ಯಕರ್ತರ ಗೌರವಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಪ್ರಾಮಾಣಿಕವಾದ ರಾಜಕೀಯ ಜೀವನ ನಡೆಸಿದ್ದು ಮುಂದೆಯೂ ಇದೇ ರೀತಿ ನಡೆಯುತ್ತೇನೆ. ಇದು ನನ್ನ ಕಡೆಯ ಚುನಾವಣೆಯಾಗಿದ್ದು ತಮ್ಮೆಲ್ಲರ ಆಶೀರ್ವಾದ ಮತ್ತು ಕಾರ್ಯಕರ್ತರ ಅವಿರತ ಪ್ರಯತ್ನ ಅಗತ್ಯವಾಗಿದೆ. ಮತ್ತೊಮ್ಮೆ ಗೆದ್ದು ಬಂದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ ಎಂದು ರಮಾನಾಥ ರೈ ಹೇಳಿದರು.
ಎಲ್ಲಾ ಜಾತಿ,ಧರ್ಮದವರನ್ನು ಸಮಾನವಾಗಿ ಪ್ರೀತಿಸಿದ್ದೇನೆ, ಎಲ್ಲರನ್ನೂ ಸಹೋದರರಂತೆ ಕಂಡಿದ್ದೇನೆ. ಸಮಪಾಲು ಸಮಬಾಳು, ಪರಧರ್ಮ ಸಹಿಷ್ಣುತೆ ನನ್ನ ಬದುಕಿನ ತತ್ವವಾಗಿದ್ದು ಎಲ್ಲಾ ಧರ್ಮದ ಧಾರ್ಮಿಕ ನಂಬಿಕೆಗಳನ್ನು ಸಮಾನವಾಗಿ ಗೌರವಿಸುತ್ತೇನೆ. ಆದುದರಿಂದ ಎಲ್ಲಾ ಜಾತಿ, ಧರ್ಮದ ಜನತೆಯ ಆಶೀರ್ವಾದ ನನಗಿದೆ ಎಂಬ ವಿಶ್ವಾಸ ನನ್ನದಾಗಿದೆ ಎಂದು ರೈ ಹೇಳಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ಪಿಯೂಸ್ ಎಲ್.ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಜಯಂತಿ ವಿ.ಪೂಜಾರಿ, ಲುಕ್ಮಾನ್ ಬಿ.ಸಿ.ರೋಡು ಮೊದಲಾದವರಿದ್ದರು. ಮಾಜಿ ಶಾಸಕ ಯು.ಟಿ.ಖಾದರ್, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು.

ಜೆಡಿಎಸ್ ಮುಖಂಡ ಕಾಂಗ್ರೇಸ್ ಸೇರ್ಪಡೆ

ಇದೇ ಸಂದರ್ಭ, ಈ ಹಿಂದೆ ಜೆಡಿಎಸ್ ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೈಲಾರ್ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿದರು. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ ವಂದಿಸಿದರು.

ವರದಿ:ಗೋಪಾಲ ಅಂಚನ್ ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318